ಪ್ರೊಫೆಸರ್
ಎ. ಆರ್. ಕೃಷ್ಣಶಾಸ್ತ್ರಿಗಳು

ಹೊಸಗನ್ನಡ ಸಾಹಿತ್ಯದ ಕಣ್ಮಣಿಗಳಲ್ಲಿ ಒಬ್ಬರಾಗಿದ್ದು, ಕನ್ನಡ ಭಾಷೆ ಸಾಹಿತ್ಯಗಳ ಅಭಿವೃದ್ಧಿಗೆ ಅರ್ಧಶತಮಾನಕ್ಕೂ ಹೆಚ್ಚು ಕಾಲ ಏಕಪ್ರಕಾರವಾಗಿ ಶ್ರಮಿಸಿದ ಪ್ರಾಧ್ಯಾಪಕ ಎ. ಆರ್. ಕೃಷ್ಣಶಾಸ್ತ್ರಿಗಳು ಕನ್ನಡನಾಡಿನ ಪುಣ್ಯಚೇತನರಲ್ಲಿ ಗಣ್ಯರು. ಅವರು ವಿರೋಧಿನಾಮ ಸಂವತ್ಸರದ ಮಾಘ ಬಹುಳ ಸಪ್ತಮೀ ಬುಧವಾರದಂದು, ಎಂದರೆ ೧೮೯೦ರ ಫೆಬ್ರವರಿ ೧೨ ರಂದು ಮೈಸೂರಿನ ಒಂದು ಅಗ್ರಹಾರದಲ್ಲಿ ಹುಟ್ಟಿದರು. ಅವರ ತಂದೆ ಮೈಸೂರು ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ತರ್ಕ ವ್ಯಾಕರಣಾದಿ ಶಾಸ್ತ್ರ ವಿಷಯಗಳಲ್ಲಿ ಪ್ರಧಾನಾಧ್ಯಾಪಕರಾಗಿದ್ದ ಅಂಬಳೆ ರಾಮಕೃಷ್ಣ ಶಾಸ್ತ್ರಿಗಳು, ತಾಯಿ ಶಂಕರಮ್ಮನವರು.

ಕೃಷ್ಣಶಾಸ್ತ್ರಿಗಳು ಮೈಸೂರು ಮಹಾರಾಜ ಕಾಲೇಜಿನಲ್ಲಿ ಇತಿಹಾಸ ಮತ್ತು ಭಾಷಾವಿಷಯಗಳನ್ನು ಅಭ್ಯಾಸ ಮಾಡಿ ೧೯೧೩ ರಲ್ಲಿ ಬಿ.ಎ. ಪದವೀಧರರಾದರು. ೧೯೧೪ರಲ್ಲಿ ಮದರಾಸು ವಿಶ್ವವಿದ್ಯಾನಿಲಯದಿಂದ ಸಂಸ್ಕೃತ-ಕನ್ನಡ ಭಾಷಾವಿಷಯಗಳಲ್ಲಿ ಎಂ.ಎ. ಪದವೀಧರರಾದರು. ಮೈಸೂರು ವಿಶ್ವವಿದ್ಯಾನಿಲಯ ಸ್ವತಂತ್ರವಾಗಿ ಸ್ಥಾಪನೆಗೊಂಡು ಕಾರ್ಯ ನಿರ್ವಹಿಸಲು ಆರಂಭಿಸುವುದಕ್ಕೆ ಒಂದು ವರ್ಷ ಮೊದಲು, ೧೯೧೫ರಲ್ಲಿ ಕನ್ನಡ ಅಧ್ಯಾಪನವೃತ್ತಿಗೆ ಪ್ರವೇಶಗೊಂಡರು. ೧೯೧೯ರಿಂದ ೨೨ರ ವರೆಗೆ ವಿವಿಧ ಶೈಕ್ಷಣಿಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ ಕನ್ನಡದ ಮೊದಲ ಪ್ರಾಧ್ಯಾಪಕರಾಗಿದ್ದ ಟಿ.ಎಸ್.ವೆಂಕಣ್ಣಯ್ಯನವರ ಅನಂತರದಲ್ಲಿ ಆ ಸ್ಥಾನಕ್ಕೆ ನಿಯುಕ್ತಿಗೊಂಡು ೧೯೪೭ರಲ್ಲಿ ವೃತ್ತಿಯಿಂದ ವಿಶ್ರಾಂತಿ ಪಡೆದರು.

ಹೊಸಗನ್ನಡ ಸಾಹಿತ್ಯದ ಕಾರಣಪುರುಷರೆಂದೂ ಕನ್ನಡ ನವೋದಯದ ಪ್ರವರ್ತಕರೆಂದೂ ಖ್ಯಾತರಾದ ಬಿ.ಎಂ.ಶ್ರೀಕಂಠಯ್ಯನವರ ಪ್ರಿಯಶಿಷ್ಯರಾಗಿ, ಅವರ ಪ್ರೇರಣೆ ಪ್ರೋತ್ಸಾಹಗಳಿಂದ ಕೃಷ್ಣಶಾಸ್ತ್ರಿಗಳು ಕನ್ನಡದ ಬೋಧನೆಯಲ್ಲಿ, ಸಾಹಿತ್ಯರಚನೆಯಲ್ಲಿ, ವಿಮರ್ಶೆ ವಿಶ್ಲೇಷಣೆಗಳಲ್ಲಿ ಪ್ರಾಚ್ಯ ಮತ್ತು ಪಾಶ್ಚಾತ್ಯ ವಿಚಾರಧಾರೆಯನ್ನೂ ವಿಧಿವಿಧಾನಗಳನ್ನೂ ಗಾಢವಾದ, ವ್ಯಾಪಕವಾದ ವ್ಯಾಸಂಗದ ಬಲದಿಂದ ಸ್ವತಃ ರೂಢಿಸಿಕೊಂಡರು. ತಮ್ಮ ಶಿಷ್ಯರಲ್ಲಿಯೂ ಬೆಳೆಯುವಂತೆ ಮಾರ್ಗದರ್ಶನಮಾಡಿದರು. ಅನಂತರದ ವರ್ಷಗಳಲ್ಲಿ, ಕನ್ನಡ ಭಾಷೆ ಸಾಹಿತ್ಯಗಳ ಕ್ಷೇತ್ರದಲ್ಲಿ ತಮ್ಮ ಸಾಧನೆಗಳಿಂದ ಎತ್ತರದ ಜಲ ಚಿಹ್ನೆಗಳನ್ನು ನಿರ್ಮಿಸಿದ ಕವಿಶ್ರೇಷ್ಠರಾದ ಕುವೆಂಪು ಅವರು, ವಿದ್ವಾಂಸವರಿಷ್ಠರಾದ ತೀ. ನಂ. ಶ್ರೀಕಂಠಯ್ಯನವರು, ಡಿ.ಎಲ್. ನರಸಿಂಹಾಚಾರ್ಯರು ಮೊದಲಾದವರು ಕೃಷ್ಣಶಾಸ್ತ್ರಿಗಳನ್ನು ಗೌರವಾದರ ಭಾವದಲ್ಲಿ ಸ್ಮರಿಸಿದ್ದಾರೆ. ಹೊಸಗನ್ನಡ ಭಾಷೆ ಸಾಹಿತ್ಯಗಳಲ್ಲಿ ಶಕ್ತಿ ಸತ್ತ್ವಗಳನ್ನು, ಸರಳತೆ ಸೌಲಭ್ಯಗಳನ್ನು, ಹೊಗರುಳ್ಳ ಹೊಸತನ ಹೃದ್ಯತೆಗಳನ್ನು ನಿರಂತರವಾಗಿ ತುಂಬುತ್ತ, ಅದಕ್ಕಾಗಿ ಯೋಧನಂತೆ ಹೋರಾಡಿ, ಭಕ್ತನಂತೆ ಹರಕೆಹೊತ್ತು, ಜೀವನದ ಕೃತಕೃತ್ಯತೆಯನ್ನು ಶಾಸ್ತ್ರಿಗಳು ಕಂಡುಕೊಂಡರು. ತಮ್ಮ ೭೮ನೆಯ ವಯಸ್ಸಿನಲ್ಲಿ ಕನ್ನಡ ಭಾರತಿಯ ಕೈಂಕರ್ಯದ ನೊಗವನ್ನು ಕಳಚಿಕೊಂಡು ೧೯೬೮ರ ಫೆಬ್ರವರಿ ೧ರಂದು ತಮ್ಮ ಪಾರ್ಥಿವ ಶರೀರವನ್ನು ತ್ಯಜಿಸಿದರು.

ಕೃಷ್ಣಶಾಸ್ತ್ರಿಗಳು ಹುಟ್ಟುಹಾಕಿದ ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘ ಇಂದು ಕನ್ನಡ ನಾಡಿನ ತುಂಬ ಕನ್ನಡ ಸಂಘಗಳೆಂಬುದಾಗಿ ಕವಲೊಡೆದು ಹೆಮ್ಮರವಾಗಿ ಹಬ್ಬಿದೆ. ಅವರು ಪ್ರಾರಂಭಿಸಿದ ಪ್ರಬುದ್ಧ ಕರ್ಣಾಟಕವೆಂಬ ಉನ್ನತ ಶೈಕ್ಷಣಿಕ ಸಾಹಿತ್ಯ ಪತ್ರಿಕೆ ಈಗ ಬೆಳ್ಳಿಯ, ಚಿನ್ನದ ಹಾಗೂ ವಜ್ರದ ಹಬ್ಬಗಳನ್ನು ದಾಟಿ ಶತಮಾನೋತ್ಸವಕ್ಕೆ ಫಲಪ್ರದವಾಗಿ ಸಾಗಿ ಬಂದಿದೆ. ಅವರಿಂದ ಮಾತು ಕಲಿತ, ಬರಹದಲ್ಲಿ ಪಳಗಿದ, ನಾನಾ ಮುಖವಾಗಿ ತಮ್ಮನ್ನು ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡು ಕೀರ್ತಿವಂತರಾದ ಕನ್ನಡಿಗರು ನಾಡು ನುಡಿಗಳನ್ನು ಅಭ್ಯುದಯಪಥದಲ್ಲಿ ಮುನ್ನಡಸಿದ್ದಾರೆ. ದೀಪದಿಂದ ದೀಪ ಬೆಳಗಿ ದೀಪಮಾಲೆ ಬೆಳಗುತ್ತಲೇ ಇದೆ.

ಸ್ವತಃ ಕೃಷ್ಣಶಾಸ್ತ್ರಿಗಳು ರಚಿಸಿದ ಸಾಹಿತ್ಯಕೃತಿಗಳು ‘ಸಂಸ್ಕೃತ ನಾಟಕ’, ‘ವಚನ ಭಾರತ’, ‘ಕಥಾಮೃತ’, ‘ಬಂಕಿಮಚಂದ್ರ’ ಮೊದಲಾದುವು ಉತ್ತಮಸಾಹಿತ್ಯ ಕೃತಿಗಳಾಗಿ, ಮಾದರಿಗಳಾಗಿ ಮಾನ್ಯತೆಪಡೆದಿವೆ.

ಸಂಸ್ಕೃತ, ಕನ್ನಡ, ಇಂಗ್ಲಿಷ್, ತಮಿಳು, ತೆಲುಗು, ಬಂಗಾಳಿ, ಜರ್ಮನ್ ಭಾಷೆಗಳಲ್ಲಿ ಪರಿಣತಿಗಳಿಸಿ ಹದಗೊಂಡ ಪಾಂಡಿತ್ಯ, ಉತ್ತಮ ಕಾವ್ಯಸಂಸ್ಕಾರ, ವಿಶಾಲವಾದ ಲೋಕಾನುಭವ, ಪರಿಪಕ್ವವಾದ ವಿಮರ್ಶನಸಾಮರ್ಥ್ಯ ಇವುಗಳಿಂದಾಗಿ ಶಾಸ್ತ್ರಿಗಳ ಕೆಲವು ರಚನೆಗಳು ಇಂಗ್ಲಿಷ್ ಭಾಷೆಯಲ್ಲಿಯೂ ಇಂತಹವು ಇಲ್ಲ ಎಂಬ ಖ್ಯಾತಿಯನ್ನು ಅವರಿಗೆ ತಂದುಕೊಟ್ಟಿವೆ.

ವ್ಯಕ್ತಿಯಾಗಿ ಎ. ಅರ್. ಕೃ. ಅವರು ಉದಾತ್ತಚರಿತರು, ತೇಜಸ್ವಿಗಳು, ಸಾತ್ತ್ವಿಕರು, ಆಪ್ತರಾದ ಎಲ್ಲರಿಗೂ ಕಲ್ಪವೃಕ್ಷದಂತೆ ಇದ್ದವರು. ಅವರು ರಚಿಸಿದ ಸಾಹಿತ್ಯ ಸುಮಾರು ಮೂರು ಸಾವಿರ ಪುಟಗಳನ್ನು ಮೀರುವ ಪ್ರಮಾಣದಲ್ಲಿದೆ. ಅವರ ವ್ಯಕ್ತಿತ್ವ, ಸಾಧನೆ, ಕೃತಿವಿಮರ್ಶೆ ಇವನ್ನು ಒಳಗೊಂಡ ಸಾಹಿತ್ಯ ಸಹ ಸುಮಾರು ಒಂದು ಸಾವಿರ ಪುಟವೇ ಆಗಬಹುದು.

ಪ್ರೊ. ಎ. ಆರ್. ಕೃಷ್ಣಶಾಸ್ತ್ರಿಗಳ ಪ್ರಸಿದ್ಧ ಶಿಷ್ಯರಲ್ಲಿ ಗಣ್ಯರಾಗಿರುವ ಶ್ರೀ ಕುವೆಂಪು ಅವರು ತಮ್ಮ ಗುರುಗಳನ್ನು ಹೀಗೆ ನೆನೆದಿದ್ದಾರೆ:

“ಶ್ರೀ ಕೃಷ್ಣಶಾಸ್ತ್ರಿಗಳ ನೆನಪೇ ಒಂದು ಪೂಜ್ಯವಸ್ತು. ಅವರು ಇಂದು ದೇಹಚಕ್ಷುವಿಗೆ ಅಗಮ್ಯವಾಗಿದ್ದಾರೆ, ಆದರೆ ಹೃದಯಚಕ್ಷುವಿಗೆ ಧ್ಯಾನಗಮ್ಯರಾಗಿದ್ದಾರೆ.”

ಪ್ರೊಫೆಸರ್
ಟಿ. ವಿ. ವೆಂಕಟಾಚಲ ಶಾಸ್ತ್ರೀ